ರನ್ನನು ಕ್ರಿ.ಶ.೯೪೯ರಲ್ಲಿ ಬೆಳುಗುಲಿ (ಈಗಿನ ರನ್ನ ಬೆಳಗಲಿ ತಾ|| ಮುಧೋಳ) ಗ್ರಾಮದಲ್ಲಿ ಜನಿಸಿದನು. ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ. ರನ್ನನು ಜೈನ ಮನೆತನದ ಬಳೆಗಾರ ಕುಲದವನು..ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ. ಈತನು ಐದು ಕೃತಿಗಳನ್ನು ರಚಿಸಿದ್ದು ಮೂರು ಕೃತಿಗಳು ಮಾತ್ರ ಲಭ್ಯವಿವೆ:
ರನ್ನನ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ವಿಚಾರಗಳು ಇವನ ಎರಡೂ ಕೃತಿಗಳಿಂದ ದೊರೆಯುತ್ತವೆ. ಘಟಪ್ರಭಾ ಮತ್ತು ಕೃಷ್ಣಾ ನದಿಗಳು ಹರಿಯುವಲ್ಲಿ ತದ್ದವಾಡಿಗೆ ದಕ್ಷಿಣಕ್ಕೂ ತೊರಗಲಿಗೆ ಉತ್ತರಕ್ಕೂ ಬೆಳುಗಲಿ ದೇಶವಿದೆ. ಈ ಬೆಳುಗುಲಿ 500ರಲ್ಲಿ ಅಗ್ಗಳವೆನಿಸುವ ಜಮಖಂಡಿ ಎಂಬ ಪ್ರಾಂತ್ಯವಿದೆ. ಇದಕ್ಕೆ ತಿಲಕಪ್ರಾಯವಾಗಿ ಪ್ರಸಿದ್ಧಿ ಪಡೆದ ಬೆಳುಗುಲಿ (ಈಗಿನ ರನ್ನ ಬೆಳಗಲಿ) ಎಂಬುದೇ ರನ್ನನ ಜನ್ಮಸ್ಥಳ. ತಾಯಿ ಅಬ್ಬಲಬ್ಬೆ; ತಂದೆ ಜಿನವಲ್ಲಭ; ಅಣ್ಣಂದಿರು ರೇಚಣ ಮತ್ತು ಮಾರಯ್ಯ. ರನ್ನನ ಸಾಂಸಾರಿಕ ಜೀವನ ಕೂಡ ಚೆನ್ನಾಗಿತ್ತು. ಇವನಿಗೆ ಶಾಂತಿ ಮತ್ತು ಜಕ್ಕಿ ಎಂಬ ಇಬ್ಬರು ಹೆಂಡತಿಯರು. ಧರ್ಮದಲ್ಲಿ ನಿಷ್ಠೆಯುಳ್ಳವರೆಂದು ಇವರ ವರ್ಣನೆ. ಇವರಿಗೆ ರಾಯ ಮತ್ತು ಅತ್ತಿಮಬ್ಬೆ ಎಂಬ ಇಬ್ಬರು ಮಕ್ಕಳಿದ್ದರು. ತನ್ನ ಮಕ್ಕಳಿಗೆ ಚಾವುಂಡರಾಯ ಮತ್ತು ಅತಿಮಬ್ಬೆಯರ ಹೆಸರುಗಳನ್ನು ಇಡುವುದರ ಮೂಲಕ ಕವಿ ಅವರ ಉಪಕಾರಕ್ಕೆ ಗೌರವವನ್ನು ತೋರಿದ್ದಾನೆ.
ರನ್ನ ಜೈನಧರ್ಮೀಯನಾದರೂ ವೈಶ್ಯ ಪಂಗಡದವನೆಂದು ಹೇಳಲಾಗಿದೆ. ಕವಿ ತನ್ನ ಕಾವ್ಯಗಳಲ್ಲಿ ಪುಟ್ಟಿದ ಬಳೆಗಾರ ಕುಲದೊಳ್ ಎಂದು ಸ್ಪಷ್ಟವಾಗಿ ಹೇಳಿಕೊಂಡಿದ್ದಾನೆ. ಜೊತೆಗೆ ವೈಶ್ಯಧ್ವಜ, ವಣಿಕ್ಕುಳಾರ್ಕ ಎಂಬ ಪದಗಳನ್ನು ಪದೇ ಪದೇ ಬಳಸಿದ್ದಾನೆ. ಇಂತಹ ವರ್ಗವೊಂದರಿಂದ ಬಂದ ವ್ಯಕ್ತಿಯೊಬ್ಬ ಕವಿಯಾದದ್ದು ವಿಶೇಷ. ಆದರೂ ಈ ವರ್ಗಸಂವೇದನೆ ಇವನ ಕಾವ್ಯಗಳಲ್ಲಿ ಇಲ್ಲ. ಅಷ್ಟರಮಟ್ಟಿಗೆ ಜೈನಧರ್ಮ ಇವನನ್ನು ಆವರಿಸಿದೆ.
ರನ್ನನಿಗೆ ತಂದೆಯಿಂದ ಬಳುವಳಿಯಾಗಿ ಬಂದದ್ದು ಬಳೆಗಾರವೃತ್ತಿ. ಆದರೆ ರನ್ನ ಪ್ರತಿಕೂಲ ಪರಿಸ್ಥಿತಿಯೊಡನೆ ಹೋರಾಡಿ ಕವಿಯಾದವನು. ಚಿಕ್ಕಂದಿನಿಂದಲೂ ಓದಿನಲ್ಲಿ ಆಸಕ್ತನಾಗಿದ್ದ ಈತ ತನ್ನ ಆಸಕ್ತಿಯನ್ನು ಪೂರೈಸಿಕೊಳ್ಳಲು ದಕ್ಷಿಣದ ಗಂಗರಾಜ್ಯಕ್ಕೆ ಬರಬೇಕಾಯಿತು. ಇದಕ್ಕೆ ಆ ಕಾಲದಲ್ಲಿ ಶ್ರವಣಬೆಳಗೊಳ ಜೈನ ಸಂಸ್ಕøತಿಯ ಕೇಂದ್ರವಾಗುತ್ತಿದ್ದುದ್ದು ಕಾರಣವಿರಬೇಕು. ಜೊತೆಗೆ ಚಾವುಂಡರಾಯನ ವ್ಯಕ್ತಿತ್ವ ಕೀರ್ತಿಗಳೂ ಸೇರಿರಬೇಕು. ಪುಣ್ಯ ವಿಶೇಷದಿಂದ ಇವನಿಗೆ ಗಂಗಮಂತ್ರಿ ಚಾಮುಂಡರಾಯನ ಆಶ್ರಯ ಸಿಕ್ಕಿತು. ಗಂಗರಾಜರ ಗುರುಗಳಾದ ಅಜಿತಸೇನಾಚಾರ್ಯರು ಇವನಿಗೆ ಗುರುಗಳಾಗಿ ದೊರೆತಂದು ಇವನಲ್ಲಿದ್ದ ಧಾರ್ಮಿಕ ಆಸಕ್ತಿ ಬೆಳೆಯಲು ಅನುಕೂಲವಾಯಿತು. ಈ ಸನ್ನಿವೇಶದಲ್ಲಿ ರನ್ನ ಕವಿಯಾಗಿಯೂ ವಿದ್ವಾಂಸನಾಗಿಯೂ ಹೊರಹೊಮ್ಮಲು ಸಾಧ್ಯವಾಯಿತು.